ಚಕ್ಕೋತ - 
ರೂಟೇಸೀ ಕುಂಟುಂಬಕ್ಕೆ (ಕಿತ್ತಳೆ, ನಿಂಬೆ ಮುಂತಾದವುಗಳ ಗುಂಪು) ಸೇರಿದ ಒಂದು ಪ್ರಸಿದ್ಧ ಹಣ್ಣಿನ ಮರ. ಗ್ರೇಪ್ ಹಣ್ಣಿನ ಮರಕ್ಕೆ ಬಲು ಹತ್ತಿರ ಸಂಬಂಧಿ (ನೋಡಿ- ಗ್ರೇಪ್-ಹಣ್ಣು). ಸಿಟ್ರಸ್ ಗ್ರ್ಯಾಂಡಿಸ್ ಎಂಬುದು ಇದರ ವೈಜ್ಞಾನಿಕ ಹೆಸರು. ಸಿಟ್ರಸ್ ಮ್ಯಾಕ್ಸಿಮ. ಸಿ. ಡೆಕಮೇನ ಎಂಬವು ಪರ್ಯಾಯನಾಮಗಳು. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದನ್ನು ಷ್ಯಾಡಕ್, ಪಮೆಲೊ ಎಂದು ಕರೆಯುವುದುಂಟು, ಕನ್ನಡದಲ್ಲಿ ಸಕ್ಕರೆಕಂಚಿ, ಸಿಹಿಕಂಚಿ ಎಂಬ ಹೆಸರುಗಳೂ ಇವೆ.

ಚಕ್ಕೋತದ ತವರು ಥೈಲೆಂಡ್ ಇಲ್ಲವೆ ಮಲಯ ಎಂದು ಹೇಳಲಾಗಿದೆ. ಬಹು ಹಿಂದೆಯೇ ಭಾರತ, ಚೀನ ಮತ್ರು ಪರ್ಷಿಯಗಳಿಗೆ ಇದು ಕಾಲಿಟ್ಟಿತು. 12 ಇಲ್ಲವೆ 13ನೆಯ ಶತಮಾನದ ವೇಳೆಗೆ ಯೂರೋಪಿಗೂ 17ನೆಯ ಶತಮಾನದಲ್ಲಿ ಬಾರ್ಬಡಾಸಿಗೂ ಚಕ್ಕೋತವನ್ನು ತಂದು ಬೆಳೆಸಲಾಯಿತು. ಬಾರ್ಬಡಾಸಿಗೆ ಇದನ್ನು ಈಸ್ಟ್ ಇಂಡಿಯ ಕಂಪನಿಗೆ ಸೇರಿದ ಹಡಗೊಂದರ ಕ್ಯಾಪ್ಟನ್ ಷ್ಯಾಡಕ್ ಎಂಬಾತ ತಂದನಂತೆ. ಇದರಿಂದಲೇ ಚಕ್ಕೋತಕ್ಕೆ ಷ್ಯಾಡಕ್ಕೆ ಎಂಬ ಸಾಮಾನ್ಯ ಬಳಕೆಯ ಹೆಸರು ಬಂದಿರಬೇಕೆಂದು ತಿಳಿಯಲಾಗಿದೆ. ಬಲುಬೇಗ ವೆಸ್ಟ್ ಇಂಡೀಸಿನಲ್ಲೆಲ್ಲ ಹರಡಿದ ಇದನ್ನು ಅನಂತರ ಉತ್ತರ ಅಮೆರಿಕದಲ್ಲೂ ಬೆಳೆಸಲಾಯಿತು. ಅದರೆ ಪ್ರಪಂಚದಲ್ಲಿ ಎಲ್ಲೂ ಕಿತ್ತಳೆ, ಮೋಸಂಬಿ ಇತ್ಯಾದಿಗಳಷ್ಟು ಹೆಚ್ಚಿನ ಪ್ರದೇಶದಲ್ಲಿ ಚಕ್ಕೋತದ ಬೆಳೆ ಇಲ್ಲ. ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬು ಮತ್ತು ಉತ್ತರ ಪ್ರದೇಶಗಳಲ್ಲಿ ಲಘು ಪ್ರಮಾಣದಲ್ಲಿ ಇದನ್ನು ಬೆಳೆಸಲಾಗುತ್ತಿದೆ.

ಚಕ್ಕೋತ ಸುಮಾರು 5-15 m ಎತ್ತರಕ್ಕೆ ಬೆಳೆಯುವ ಪೊದೆಯಂಥ ಮರ. ಎಳೆಯ ರೆಂಬೆಗಳ ಮತ್ತು ಎಲೆಗಳ ಮೇಲೆ ಮೃದುವಾದ ಕೂದಲುಗಳಿವೆ. ಎಲೆಗಳ ಬಣ್ಣ ದಟ್ಟಹಸಿರು. ತೊಟ್ಟಿನ ಮೇಲೆ ಎರಡು ರೆಕ್ಕೆಗಳಿವೆ. ಹೂಗಳು ದೊಡ್ಡ ಗಾತ್ರದವು; ಒಂಟೊಂಟಿಯಾಗಿವೆ ಇಲ್ಲವೆ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ದಳ ಕೆನೆಬಣ್ಣದ್ದು. ಕೇಸರುಗಳು 20-25. ಫಲ ಕಿತ್ತಳೆ, ನಿಂಬೆಗಳಲ್ಲಿರುವಂತೆಯೇ ಹೆಸ್ಪರಿಡಿಯಮ್ ಮಾದರಿಯದು. ಆದರೆ ಗಾತ್ರದಲ್ಲಿ ಬಲುದೊಡ್ಡದು (10-30 ಛಿm ವ್ಯಾಸವುಳ್ಳದ್ದು). ಸಿಪ್ಪೆಯೂ ಬಲದಪ್ಪ. ಫಲದ ಆಕಾರ ಗುಂಡು ಇಲ್ಲವೆ ಪೇರುಹಣ್ಣಿನಂತೆ, ಹಣ್ಣಿನ ಬಣ್ಣ ನಸುಹಳದಿ. ತೊಳೆಗಳ ಬಣ್ಣ ತಿಳಿಹಳದಿ ಇಲ್ಲವೆ ಪಾಟಲ. ತೊಳೆಗಳನ್ನು ಸುಲಭವಾಗಿ ಬಿಡಿಸಬಹುದು. ಹಣ್ಣಿಗೆ ಹುಳಿ ಮಿಶ್ರಿತ ಸಿಹಿರುಚಿಯಿದೆ. ಬೀಜಗಳು ಕಿತ್ತಳೆ ಮುಂತಾದವುಗಳ ಬೀಜಗಳಿಗಿಂತ ದೊಡ್ಡವು. ಕೆಲವು ಬಗೆಗಳಲ್ಲಿ ಬೀಜಗಳೇ ಇರುವುದಿಲ್ಲ. ಚಕ್ಕೋತದ ಬೇಸಾಯ ಕ್ರಮವೆಲ್ಲ ಕಿತ್ತಳೆಯ ರೀತಿಯಲ್ಲಿ ಇದೆ. ಚಕ್ಕೋತದಲ್ಲಿ ಅನೇಕ ಬಗೆಗಳಿವೆ ; ಇವುಗಳಲ್ಲಿ ಮ್ಯಾಮತ್, ಟ್ರೆಸ್ಕ ಮತ್ತು ಪಿಂಕ್ ಎಂಬವು ಮುಖ್ಯವೆನಿಸಿವೆ.

ಚಕ್ಕೋತ ಪುಷ್ಟಿಕಾರಕ ಹಾಗೂ ತಂಪುಕಾರಕವೆಂದು ಹೆಸರಾಗಿದೆ. ಇದನ್ನು ಹಾಗೆಯೇ ತಿನ್ನುವುದಲ್ಲದೆ ಮುರಬ್ಬ ಮುಂತಾದ ರೂಪಗಳಲ್ಲೂ ಬಳಸುವುದುಂಟು. ಇದರ ಸಿಪ್ಪೆಯಿಂದ ಒಂದು ರೀತಿಯ ಕಹಿ ಪದಾರ್ಥವನ್ನು ತಯಾರಿಸಿ ಷೆರಿ ಮುಂತಾದ ಮಾದಕ ಪಾನೀಯಗಳೊಂದಿಗೆ ಲಘುಪ್ರಮಾಣದಲ್ಲಿ ಸೇರಿಸಿ ಕುಡಿಯುವುದುಂಟು. ಚಕ್ಕೋತದ ಎಲೆಗಳನ್ನು ಅಪಸ್ಮಾರ, ಸಂಕ್ಷೋಭಕ ಕೆಮ್ಮು ಮುಂತಾದ ರೋಗಗಳ ಚಿಕಿತ್ಸೆಯಲ್ಲಿ ಬಳಸುವುದಿದೆ.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ